ಕೇಸರಿ 2

ಒಬ್ಬ ವಾನರ ಶ್ರೇಷ್ಠ. ಹೆಂಡತಿ ಅಂಜನೆ. ಮಗ ಆಂಜನೇಯ. ಸೂರ್ಯನ ವರದಿಂದ ಸ್ವರ್ಣಮಯವಾಗಿದ್ದ ಸುಮೇರುಪರ್ವತ ಈತನ ರಾಜ್ಯ. ಗೋಕರ್ಣ ವಾಸಸ್ಥಳ. ಶಂಭಸಾದನನೆಂಬ ರಾಕ್ಷಸ ಬಲಾಢ್ಯನಾಗಿ ಋಷಿಗಳಿಗೆ ಕಿರುಕುಳ ಕೊಟ್ಟನಾಗಿ, ಅವರೆಲ್ಲರೂ ಸೇರಿ ಕೇಸರಿಯನ್ನು ಪ್ರಾರ್ಥಿಸಿಕೊಳ್ಳಲು ಆತ ಶಂಭಸಾದನನನ್ನು ಕೊಂದು ಋಷಿಕಂಟಕವನ್ನು ಪರಿಹರಿಸಿದ. ಇದರಿಂದ  ಸುಪ್ರೀತರಾದ ಋಷಿಗಳು ಕೇಸರಿಗೆ ಸಕಲ ಶಾಸ್ತ್ರಪಾರಂಗತನೂ, ಇಚ್ಛಾ ಸಂಚಾರಿಯೂ, ಬಲಾಧಿಕನೂ ಬ್ರಹ್ಮನಿಷ್ಠನೂ ಆದ ಮಗ ಜನಿಸಲೆಂದು ಹರಸಿದರು. ಜಗದಾಯುವಾದ ವಾಯುದೇವನ ವರಪ್ರಸಾದದಿಂದ ಅಂಜನೆಯಲ್ಲಿ ಆಂಜನೇಯ ಜನಿಸಿ ಋಷಿವಾಕ್ಯವನ್ನು ಅನ್ವರ್ಥಗೊಳಿಸಿದ. ಈ ವಿವರಗಳು ರಾಮಾಯಣದಲ್ಲೂ ಮಹಾಭಾರತದ ವನಪರ್ವದಲ್ಲೂ ಬರುತ್ತವೆ. 		
(ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ